Welcome, Guest   [ Register | Sign In | Take a tour | Adult Filter: On ]

Love (ಪ್ರೀತಿ) is nothing but...

ಪ್ರೀತಿ ಎನ್ನುವುದು ಪ್ರಬಲವಾದ ಭಾವನಾತ್ಮಕ ಸಂಬಂಧ ಮತ್ತು ಬಾಂಧವ್ಯದ ಸಂವೇದನೆಗೆ ಸಂಬಂಧಿಸಿದ ಅಸಂಖ್ಯಾತ ಭಾವನೆಗಳು ಮತ್ತು ಅನುಭವಗಳ ಮೊತ್ತ. ಪ್ರೀತಿ ಎನ್ನುವ ಪದ ವಿಭಿನ್ನ ಭಾವನೆಗಳನ್ನು, ಮನೋಸ್ಥಿತಿಗಳನ್ನು ಮತ್ತು ದೃಷ್ಟಿಕೋನಗಳನ್ನು ಸೂಚಿಸುತ್ತದೆ. ಸಾರ್ವತ್ರಿಕ ಸಂತೋಷ (ಉದಾ: "ಆ ಊಟ ನನಗೆ ತುಂಬಾ ಇಷ್ಟವಾಯಿತು") ದಿಂದ ಹಿಡಿದು ಅಂತರ್‌ವ್ಯಕ್ತೀಯ ಆಕರ್ಷಣೆ (ಉದಾ: "ನಾನು ನನ್ನ ಹುಡುಗನನ್ನು ಪ್ರೀತಿಸುತ್ತೇನೆ.) ಯವರೆಗೆ ಈ ಸಮ್ಮೋಹಕ ಪದ ವ್ಯಾಪಿಸಿಕೊಂಡಿದೆ.

ಒಂದು ಅಮೂರ್ತ ಪರಿಕಲ್ಪನೆಯಾಗಿರುವ ಪ್ರೀತಿ, ಸಾಮಾನ್ಯವಾಗಿ ಬೇರೊಬ್ಬ ವ್ಯಕ್ತಿಯ ಮೇಲೆ ತೋರುವ ಸೂಕ್ಷ್ಮವಾದ ಕಾಳಜಿಯಲ್ಲಿನ ಆಳವಾದ ಮತ್ತು ಅನಿರ್ವಚನೀಯ ಭಾವನೆಗಳನ್ನು ಸೂಚಿಸುತ್ತದೆ. ಪ್ರೀತಿಯ ಈ ಸೀಮಿತ ಪರಿಕಲ್ಪನೆಯೂ ಕೂಡ, ಭಾವೋದ್ರಿಕ್ತ ವಾಂಛೆ ಮತ್ತು ಪ್ರಣಯ ಪ್ರೀತಿಯ ಲೈಂಗಿಕತೆಯಿಂದ ಹಿಡಿದು ಲೈಂಗಿಕೇತರ ಕೌಟುಂಬಿಕ ಭಾವನಾತ್ಮಕ ನಿಕಟತೆ ಮತ್ತು ಸಾತ್ವಿಕ ಪ್ರೀತಿಯ ಗಾಢ ಐಕ್ಯತೆ ಅಥವಾ ಧಾರ್ಮಿಕ ಪ್ರೀತಿಯ ಉಪಾಸನೆಯವರೆಗೆ ವಿವಿಧ ಭಾವನೆಗಳ ಶ್ರೀಮಂತಿಕೆಯನ್ನು ಒಳಗೊಳ್ಳುತ್ತದೆ. ಪ್ರೀತಿಯು ತನ್ನ ವೈವಿಧ್ಯಮಯ ರೂಪಗಳಲ್ಲಿ ಅಂತರ್‌ವ್ಯಕ್ತೀಯ ಸಂಬಂಧಗಳ ಬಹುಮುಖ್ಯ ಸುಲಭಕಾರಕನಾಗಿ ವರ್ತಿಸುತ್ತದೆ ಮತ್ತು ಇದರ ಮನಶ್ಯಾಸ್ತ್ರೀಯ ಪ್ರಾಮುಖ್ಯತೆಯ ಕಾರಣದಿಂದ ಪ್ರೀತಿ ಸೃಜನಶೀಲ ಕಲೆಗಳ ಬಹಳ ಸಾಮಾನ್ಯವಾದ ವಸ್ತುವಾಗಿದೆ.

ಆದಾಗ್ಯೂ ಪ್ರೀತಿಯ ಸ್ವಭಾವ ಅಥವಾ ಮೂಲಸತ್ವ ಯಾವುದು ಎಂಬುದು ಪದೇ ಪದೇ ವಾಗ್ವಾದಕ್ಕೊಳಗಾಗುವ ವಿಚಾರ. ಪ್ರೀತಿ ಎನ್ನುವ ಪದದ ವಿಭಿನ್ನ ಆಯಾಮಗಳು ಯಾವುದು ಪ್ರೀತಿ ಅಲ್ಲ ಎಂದು ನಿರ್ಧರಿಸುವುದರಿಂದ ವಿಷದಗೊಳ್ಳಬಹುದು. ಗುಣಾತ್ಮಕ ಭಾವನೆಯ ಸಾಮಾನ್ಯ ಅಭಿವ್ಯಕ್ತಿಯಂತೆ (ಇಷ್ಟ ಎನ್ನುವ ಪದದ ಪ್ರಬಲ ರೂಪ) ಪ್ರೀತಿ ಎನ್ನುವ ಪದ ಸಾಮಾನ್ಯವಾಗಿ ದ್ವೇಷ(ಅಥವಾ ತಟಸ್ಥ ಭಾವಶೂನ್ಯತೆ) ಎನ್ನುವ ಪದದೊಂದಿಗೆ ತದ್ವಿರುದ್ಧ ಸಂಬಂಧವನ್ನು ಹೊಂದಿದೆ; ಕಡಿಮೆ ಲೈಂಗಿಕ ಗುಣ ಮತ್ತು ಪ್ರಣಯ ಸಂಬಂಧದ ಹೆಚ್ಚು ಭಾವನಾತ್ಮಕವಾದ ಸಲಿಗೆಯ ರೂಪವಾದಾಗ ಪ್ರೀತಿ ಸಾಮಾನ್ಯವಾಗಿ ಸಂಭೋಗಾಕಾಂಕ್ಷೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಹಾಗೆಯೇ ಪ್ರಣಯ ಸೂಚ್ಯಾರ್ಥಗಳಿರುವ ಅಂತರ್‌ವ್ಯಕ್ತೀಯ ಸಂಬಂಧಗಳಲ್ಲಿ ಪ್ರೀತಿ ಸ್ನೇಹದೊಂದಿಗೆ ಸಂಬಂಧ ಹೊಂದಿರುತ್ತದೆ. ಆದರೂ ಪ್ರೀತಿ ಎಂಬ ಪದದ ಇತರೆ ವ್ಯಾಖ್ಯಾನಗಳನ್ನು ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಆತ್ಮೀಯ ಸ್ನೇಹಕ್ಕೂ ಅನ್ವಯಿಸಬಹುದು.

ಅಂತರ್‌-ಸಾಂಸ್ಕೃತಿಕವಾಗಿ ಪ್ರೀತಿಯನ್ನು ಅರ್ಥೈಸಿಕೊಳ್ಳಲು ಮತ್ತಷ್ಟು ಹೇಳುವುದಾದರೆ, ಪ್ರೀತಿ ಎಂಬ ಪರಿಕಲ್ಪನೆಯ ಆಲೋಚನೆಗಳು ಕಾಲದಿಂದ ಕಾಲಕ್ಕೆ ಮಹತ್ತರವಾಗಿ ಬದಲಾವಣೆಯಾಗಿವೆ. ಪ್ರಣಯ ಸಂಬಂಧಗಳ ಮುಂಚಿನ ಅಸ್ತಿತ್ವವನ್ನು ಪ್ರಾಚೀನ ಪ್ರೇಮ ಕವಿತೆಗಳು ದೃಢೀಕರಿಸಿದ್ದರೂ ಕೆಲವು ಇತಿಹಾಸತಜ್ಞರು ಆಧುನಿಕ ಪ್ರಣಯ ಪ್ರೀತಿಯನ್ನು ಸುಸಂಸ್ಕತ ಯೂರೋಪ್‌ ಕಾಲಕ್ಕೆ ಅಥವಾ ಮಧ್ಯಕಾಲೀನ ಯುಗದ ನಂತರದ ಕಾಲಕ್ಕೆ ಕೊಂಡೊಯ್ಯುತ್ತಾರೆ.

ಅಂತರ್‌ವ್ಯಕ್ತೀಯ ಪ್ರೀತಿ ಮನುಷ್ಯರ ನಡುವಿನ ಪ್ರೀತಿಯನ್ನು ಸೂಚಿಸುತ್ತದೆ. ಇದು ಮತ್ತೊಬ್ಬರನ್ನು ಸರಳವಾಗಿ ಇಷ್ಟಪಡುವ ಗುಣಕ್ಕಿಂತ ಹೆಚ್ಚು ಪ್ರಬಲವಾದ ಭಾವನೆ. ಪ್ರತಿಯಾಗಿ ಹಿಂತಿರುಗಿಸದ ಪ್ರೀತಿಯು ಪರಸ್ಪರ ವಿನಿಮಯವಾಗದ ಪ್ರೀತಿಯ ಭಾವನಗೆಳನ್ನು ಸೂಚಿಸುತ್ತದೆ. ಅಂತರ್‌ವ್ಯಕ್ತೀಯ ಪ್ರೀತಿಯು ಅಂತರ್‌ವ್ಯಕ್ತೀಯ ಸಂಬಂಧಗಳೊಂದಿಗೆ ನಿಕಟವಾದ ಸಂಬಂಧ ಹೊಂದಿದೆ. ಈ ರೀತಿಯ ಪ್ರೀತಿ ಕಟುಂಬದ ಸದಸ್ಯರ ನಡುವೆ, ಸ್ನೇಹಿತರ ನಡುವೆ ಮತ್ತು ದಂಪತಿಗಳ ನಡುವೆ ಅಸ್ಥಿತ್ವದಲ್ಲಿರಬಹುದು. ಪ್ರೀತಿಗೆ ಸಂಬಂಧಿಸಿದಂತೆ ಅಸಂಖ್ಯಾತ ಮಾನಸಿಕ ರೋಗಗಳಿವೆ. ಉದಾಹರಣೆಗೆ ಎರೋಟೊಮೇನಿಯ.

ಇತಿಹಾಸದಾದ್ಯಂತ ತತ್ವಶಾಸ್ತ್ರ ಮತ್ತು ಧರ್ಮಗಳು ಪ್ರೀತಿ ಎಂಬ ಅಧ್ಭುತದ ಮೇಲೆ ಸಾಕಷ್ಟು ಚಿಂತನೆ ನಡೆಸಿವೆ. ಕಳೆದ ಶತಮಾನದಲ್ಲಿ ಮನಶ್ಯಾಸ್ತ್ರೀಯ ಅಧ್ಯಯನ ಈ ವಿಷಯದ ಮೇಲೆ ಅಪಾರ ಪ್ರಮಾಣದ ಬರಹವನ್ನು ಕೃತಿಗಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ವಿಕಾಸವಾದಿ ಮನಶ್ಯಾಸ್ತ್ರ, ವಿಕಾಸವಾದಿ ಜೀವಶಾಸ್ತ್ರ, ಮಾನವಶಾಸ್ತ್ರ, ನರವಿಜ್ಞಾನ ಮತ್ತು ಜೀವಶಾಸ್ತ್ರದ ವಿಜ್ಞಾನ ಶಾಖೆಗಳು ಪ್ರೀತಿಯ ಗುಣಸ್ವಭಾವ ಮತ್ತು ಕಾರ್ಯವಿಧಾನಗಳ ಗ್ರಹಿಕೆಯನ್ನು ವಿಸ್ತರಿಸಿವೆ.

ರಾಸಾಯನಿಕ ತಳಹದಿ

ಲೈಂಗಿಕ ಪ್ರವೃತ್ತಿಯ ಜೈವಿಕ ಮಾದರಿಯು ಹೆಚ್ಚಿನ ರೀತಿ ಹಸಿವು ಮತ್ತು ಬಾಯಾರಿಕೆಯಂತೆ ಸಸ್ತನಿಯ ಕ್ರಿಯಾಶಕ್ತಿ ಎಂಬುದನ್ನು ಸೂಚಿಸುತ್ತದೆ. ಪ್ರೀತಿ ಎಂಬ ವಿಷಯದಲ್ಲಿ ಪ್ರಮುಖ ತಜ್ಷೆ ಹೆಲೆನ್‌ ಫಿಶರ್‌ ಪ್ರೀತಿಯ ಅನುಭವವನ್ನು ಮೂರು ಅತಿಕ್ರಮಿಸುವ ಹಂತಗಳಾಗಿ ವಿಭಾಗಿಸುತ್ತಾರೆ. ಅವುಗಳೆಂದರೆ, ಸಂಭೋಗಾಕಾಂಕ್ಷೆ, ಆಕರ್ಷಣೆ ಮತ್ತು ಅನುರಾಗಸಂಭೋಗಾಕಾಂಕ್ಷೆ ಜನರನ್ನು ಇತರರಿಗೆ ತೆರೆದಿಡುತ್ತದೆ; ಪ್ರಣಯ ಆಕರ್ಷಣೆ ಜನರನ್ನು ಮೈಥುನದ ಮೇಲಿನ ತಮ್ಮ ಶಕ್ತಿಯ ಕಡೆ ಗಮನ ಹರಿಸುವಂತೆ ಹುರಿದುಂಬಿಸುತ್ತದೆ; ಮತ್ತು ಪ್ರೀತಿ ಶೈಶವಾವಸ್ಥೆಯೊಳಗೆ ಮಗುವನ್ನು ಸಲಹುವುದಕ್ಕೆ ಸಂಗಾತಿಯನ್ನು (ವಾಸ್ತವವಾಗಿ ಮಗು) ಸಾಕಷ್ಟು ದೂರ ಸಹಿಸಿಕೊಳ್ಳಬೇಕಾಗಿರುವುದನ್ನು ಒಳಗೊಂಡಿರುತ್ತದೆ.

ಸಂಭೋಗಾಕಾಂಕ್ಷೆಯು ಮೈಥುನವನ್ನು ಉತ್ತೇಜಿಸುವ ಲೈಂಗಿಕ ವಾಂಚೆಯ ಆರಂಭಿಕ ಭಾವೋದ್ರೇಕ ಹಾಗೂ ಟೆಸ್ಟೋಸ್ಟೆರಾನ್‌ ಮತ್ತು ಈಸ್ಟ್ರೋಜೆನ್‌ನಂತಹ ಹೆಚ್ಚಿನ ರಾಸಾಯನಿಕ ಬಿಡುಗಡೆಯನ್ನು ಇದು ಒಳಗೊಳ್ಳುತ್ತದೆ. ಈ ಪರಿಣಾಮಗಳು ವಿರಳವಾಗಿ ಕೆಲವೇ ವಾರಗಳಿಗಿಂತ ಅಥವಾ ಕೆಲವೇ ತಿಂಗಳುಗಳಲ್ಲಿ ಕೊನೆಗೊಳ್ಳುತ್ತವೆ. ಆಕರ್ಷಣೆ ಎನ್ನುವುದು ನಿರ್ದಿಷ್ಟ ವ್ಯಕ್ತಿಯ ಮೈಥುನಕ್ಕೆ ಬೇಕಾದ ಹೆಚ್ಚು ವ್ಯಕ್ತಿಗತವಾದ ಮತ್ತು ಪ್ರಣಯಾಪೇಕ್ಷಿತ ವಾಂಛೆ. ಇದು ವ್ಯಕ್ತಿಗತ ಮೈಥುನದ ರೂಪಗಳಿಗೆ ಬದ್ಧತೆಯಿರುವುದರಿಂದ ಸಂಭೋಗಾಕಾಂಕ್ಷೆಯನ್ನು ಬೆಳೆಸುತ್ತದೆ. ಜನರು ಪ್ರೀತಿಯಲ್ಲಿ ಬಿದ್ದೊಡನೆ ಮೆದುಳು ಫೆರೋಮೋನ್ಸ್‌, ಡೋಪಮೈನ್‌, ನೋರ್‌ಪೈನ್‌ಫ್ರೈನ್‌ ಮತ್ತು ನಡವಳಿಕೆಯಲ್ಲಿ ಆಂಪಿಟಾಮೈನ್ಸ್‌ನಂತೆಯೇ ವರ್ತಿಸುವ ಸೆರೋಟೊನಿನ್‌ನಂತಹ ನಿರ್ದಿಷ್ಟವಾದ ಕೆಲವು ರಾಯಾಯನಿಕಗಳ ಗುಂಪನ್ನು ಸ್ಥಿರವಾಗಿ ಬಿಡುಗಡೆಗೊಳಿಸುತ್ತದೆ ಎಂಬುದುನ್ನು ಇತ್ತೀಚಿನ ನರವಿಜ್ಞಾನದ ಅಧ್ಯಯನಗಳು ತೋರಿಸಿಕೊಟ್ಟಿವೆ. ಈ ರಸಾಯನಿಕಗಳು ಮೆದುಳಿನ ಆನಂದ ಕೇಂದ್ರವನ್ನು ಉತ್ತೇಜಿಸುತ್ತವೆ. ಅಲ್ಲದೆ ಹೃದಯದ ಬಡಿತವನ್ನು ಹೆಚ್ಚಿಸುವುದು, ಹಸಿವನ್ನು ಕಡಿಮೆ ಮಾಡುವುದು, ನಿದ್ರಾಹೀನತೆ ಹಾಗೂ ಭಾವ ತೀರ್ವತೆ ಮುಂತಾದ ಅಡ್ಡಪರಿಣಾಮಗಳನ್ನು ಬೀರುತ್ತದೆ. ಈ ಹಂತ ಸಾಮಾನ್ಯವಾಗಿ ಒಂದೂವರೆ ವರ್ಷದಿಂದ ಮೂರು ವರ್ಷಗಳಲ್ಲಿ ಅಂತ್ಯಗೊಳ್ಳುತ್ತದೆ ಎಂಬುದನ್ನು ಸಂಶೋದನೆಗಳು ಸೂಚಿಸಿವೆ.

ಸಂಭೋಗಾಕಾಂಕ್ಷೆ ಮತ್ತು ಆಕರ್ಷಣೆಯ ಎರಡೂ ಹಂತಗಳನ್ನು ತಾತ್ಕಾಲಿಕ ಎಂದು ಪರಿಗಣಿಸಲಾಗಿದೆ. ಒಂದು ಸಂಬಂಧ ದೀರ್ಘಕಾಲದವರೆಗೆ ಮುಂದುವರಿಯಬೇಕಾದರೆ ಮೂರನೇ ಹಂತದ ಅಗತ್ಯವಿದೆ. ಬಾಂಧವ್ಯ ಎನ್ನುವುದು ವ್ಯಕ್ತಿಗಳ ನಡುವೆ ಹೃದಯಗಳನ್ನು ಬೆಸೆಯುವ ಶಕ್ತಿಯಾಗಿದ್ದು ಇದು ಸಂಬಂಧಗಳನ್ನು ಹಲವು ವರ್ಷಗಳವರೆಗೆ ಅಥವಾ ದಶಗಳವರೆಗೆ ಮುಂದುವರಿಸುತ್ತದೆ. ಬಾಂಧವ್ಯ ಎನ್ನುವುದು ಸಾಮಾನ್ಯವಾಗಿ ಮದುವೆ ಅಥವಾ ಮಕ್ಕಳು ಎನ್ನುವ ಬದ್ಧತೆಗಳನ್ನು ಆಧರಿಸಿರುತ್ತದೆ ಅಥವಾ ಸಮಾನ ಆಸಕ್ತಿಗಳನ್ನಾಧರಿಸಿದ ಪರಸ್ಪರ ಸ್ನೇಹವನ್ನು ಅವಲಂಬಿಸಿರುತ್ತದೆ. ಇದು ಆಕ್ಸಿಟೋಸಿನ್‌ ಮತ್ತು ವ್ಯಾಸೋಪ್ರೆಸ್ಸಿನ್‌ನಂತಹ ಉನ್ನತ ಮಟ್ಟದ ರಾಸಾಯನಿಕಗಳೊಂದಿಗೆ ಅಲ್ಪಾವಧಿಯ ಸಂಬಂಧಗಳು ಹೊಂದಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಸಂಬಂಧ ಹೊಂದಿವೆ.

ಜನರು ಮೊದಲು ಪ್ರೀತಿಯಲ್ಲಿ ಬಿದ್ದಾಗ ನರ್ವ್‌ ಗ್ರೋಥ್ ಪ್ಯಾಕ್ಟರ್‌ (NGF) ಎಂದು ಕರೆಯಲ್ಪಡುವ ಪ್ರೋಟೀನ್‌ ಮಾಲಿಕ್ಯೂಲ್‌ಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಆದರೆ ಒಂದು ವರ್ಷದ ಬಳಿಕ ಇವು ಸಹಜ ಸ್ಥಿತಿಗೆ ಮರಳುತ್ತವೆ ಎಂದು ಎನ್‌ಝೋ ಇಮ್ಯಾನ್ಯುಯೆಲ್‌ ಮತ್ತು ಅವರ ಸಹೋದ್ಯೊಗಿಗಳು ವರದಿ ಮಾಡಿದ್ದಾರೆ.

ಮನಶ್ಯಾಸ್ತ್ರೀಯ ತಳಹದಿ

ಪ್ರೀತಿ ಎನ್ನುವುದು ಸಂವೇದನೆಯ ಮತ್ತು ಸಾಮಾಜಿಕ ವಿದ್ಯಮಾನ ಎಂದು ಮನಶ್ಯಾಸ್ತ್ರ ವರ್ಣಿಸುತ್ತದೆ. ರಾಬರ್ಟ್‌ ಸ್ಟೆರ್ನ್‌ಬರ್ಗ್‌ ಎನ್ನುವ ಮನಶ್ಯಾಸ್ತ್ರಜ್ಞ ಪ್ರೀತಿಯ ತ್ರಿಕೋನ ಸಿದ್ಧಾಂತವನ್ನು ರೂಪಿಸಿದ್ದಾರೆ. ಇವರು ಪ್ರೀತಿ, ಲೈಂಗಿಕ ಸಂಬಂಧ, ಬದ್ಧತೆ ಹಾಗೂ ಭಾವೋದ್ರೇಕ ಎಂಬ ಮೂರು ವಿಭಿನ್ನ ಅಂಶಗಳನ್ನು ಒಳಗೊಂಡಿರುತ್ತದೆ ಎಂದು ವಾದಿಸುತ್ತಾರೆ. ಸಲಿಗೆ ಅಥವಾ ಲೈಂಗಿಕತೆ ಎನ್ನುವುದು ಇಬ್ಬರು ವ್ಯಕ್ತಿಗಳು ವಿನಿಮಯ ಮಾಡಿಕೊಳ್ಳುವ ದೃಡ ನಂಬಿಕೆ ಮತ್ತು ಖಾಸಗಿ ಬದುಕಿನ ರಹಸ್ಯ ವಿಚಾರಗಳ ರೂಪದಲ್ಲಿರುತ್ತದೆ. ಇದು ಸಾಮಾನ್ಯವಾಗಿ ಸ್ನೇಹ ಮತ್ತು ಪ್ರಣಯ ಪ್ರೇಮದಂತಹ ಸಂಬಂಧಗಳಲ್ಲಿ ಕಂಡುಬರುತ್ತದೆ. ಶಾಶ್ವತ ಸಂಬಂಧಗಳಲ್ಲಿ ಸಂಗಾತಿಯ ಬದ್ಧತೆ ಒಂದು ನಿರೀಕ್ಷೆಯಾಗಿರುತ್ತದೆ. ಪ್ರೀತಿಯ ಕೊನೆಯ ಮತ್ತು ಸಾಮಾನ್ಯ ರೂಪವೆಂದರೆ ಲೈಂಗಿಕ ಆಕರ್ಷಣೆ ಮತ್ತು ಭಾವೋದ್ರೇಕ.ಭಾವೋದ್ರಿಕ್ತ ಪ್ರೀತಿ ವ್ಯಾಮೋಹದಲ್ಲಿ ಅದೇ ರೀತಿ ಪ್ರಣಯ ಪ್ರೀತಿಯಲ್ಲಿ ಕಂಡುಬರುತ್ತದೆ.ಕೆಳಗಿನ ಈ ಮೂರು ಅಂಶಗಳ ಬದಲಾಗುವ ಸಂಯೋಜನೆಗಳಂತೆಯೇ ಪ್ರೀತಿಯ ಎಲ್ಲ ರೂಪಗಳನ್ನು ನೋಡಲಾಗುತ್ತದೆ.ಅಮೆರಿಕದ ಮನಶ್ಯಾಸ್ತ್ರಜ್ಞ ಜಿಕ್‌ ರೂಬಿನ್‌ ಪ್ರೀತಿಯನ್ನು ಮನೋಮಾಪನ ಶಾಸ್ತ್ರದಿಂದ ವ್ಯಾಖ್ಯಾನಿಸುವ ಪ್ರಯತ್ನ ನಡೆಸುತ್ತಾರೆ.ಬಾಂಧವ್ಯ, ಆರೈಕೆ ಮತ್ತು ಲೈಂಗಿಕತೆ ಎನ್ನುವ ಮೂರು ಅಂಶಗಳು ಪ್ರೀತಿಯನ್ನು ರೂಪಿಸುತ್ತವೆ ಎಂದು ಅವನ ಸಂಶೋಧನೆಗಳು ತಿಳಿಸುತ್ತವೆ.

ಗುಣಾತ್ಮಕ ಮತ್ತು ನೇತ್ಯಾತ್ಮಕ ಶಕ್ತಿಗಳು ಪರಸ್ಪರ ಆಕರ್ಷಿಲ್ಪಡುತ್ತವೆ ಎನ್ನುವುದನ್ನು ತೋರಿಸಿಕೊಟ್ಟ ಕೌಲೋಂಬ್ಸ್‌ ನಿಯಮದಂತಹ ವಿದ್ಯುತ್‌ ಸಿದ್ಧಾಂತಗಳ ಬೆಳವಣಿಗೆಯನ್ನು ಅನುಸರಿಸಿ, ಮನುಷ್ಯನ ಬದುಕಿನಲ್ಲಿ "ವಿರುದ್ಧ ಗುಣಗಳು ಆಕರ್ಷಿಸಲ್ಪಡುತ್ತವೆ" ಎಂಬ ಅನಲಾಗ್‌ಗಳು ಅಭಿವೃದ್ಧಿಗೊಂಡವು.ಕಳೆದ ಶತಮಾನದುದ್ದಕ್ಕೂ ಮನಷ್ಯನ ಮೈಥುನದ ಸ್ವಭಾವಕ್ಕೆ ಸಂಬಂಧಿಸಿದ ಸಂಶೋಧನೆಗಳು, ಸಾಮಾನ್ಯವಾಗಿ ಗುಣ ಮತ್ತು ವ್ಯಕ್ತಿತ್ವದ ವಿಚಾರಕ್ಕೆ ಬಂದಾಗ ಇದು ಸತ್ಯವಾಗಿರುವುದಿಲ್ಲ ಎನ್ನುವುದನ್ನು ಕಂಡುಕೊಂಡವು-ಜನರು ತಮ್ಮಂತೆಯೇ ಇರುವ ಜನರನ್ನು ಇಷ್ಟಪಡುವ ಪ್ರವೃತ್ತಿ ಹೊಂದಿರುತ್ತಾರೆ.ಆದರೂ, ರೋಗನಿರೋಧಕ ಶಕ್ತಿಯಂತಹ ಕೆಲವು ಅಸಹಜ ಮತ್ತು ನಿರ್ಧಿಷ್ಟ ಕ್ಷೇತ್ರಗಳಲ್ಲಿ ಮನುಷ್ಯರು ಇತರರಿಗೆ ಎಂದರೆ ತಮಗಿಂತ ಬಿನ್ನವಾಗಿರುವ ವ್ಯಕ್ತಿಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ ಎಂದು ಕಾಣುತ್ತದೆ. (ಉದಾಹರಣಗೆ, ಲಂಬಕೋನೀಯ ರೋಗನಿರೋಧಕ ಶಕ್ತಿಯಲ್ಲಿ ), ಇಂತಹ ಸಂದರ್ಭಗಳಲ್ಲಿ ಹುಟ್ಟುವ ಮಗು ಈ ಎರಡೂ ಪ್ರಪಚಂದ ಅತ್ಯುತ್ತಮವಾದುದನ್ನು ಪಡೆದಿರುತ್ತದೆ. ಇತ್ತೀಚಿನ ವರ್ಷಗಳಲ್ಲಿ, ವಿವಿಧ ಮನುಷ್ಯ ಸಂಬಂಧ ಸಿದ್ಧಾಂತಗಳು ಅಭಿವೃದ್ಧಿಯಾಗಿವೆ. ಈ ಸಿದ್ಧಾಂತಗಳು ಒಲವು, ಬಂಧನಗಳು, ಬಾಂಧವ್ಯಗಳು ಮತ್ತು ವೈವಾಹಿಕ ಸಂಬಂಧಗಳ ಕುರಿತು ವರ್ಣಿಸಿವೆ.

ಕೆಲವು ಪಾಶ್ಚಿಮಾತ್ಯ ಅಧಿಕಾರಿಗಳು ಪರೋಪಕಾರಿ ಮತ್ತು ಆತ್ಮರತಿ ಎಂದು ಎರಡು ಮುಖ್ಯ ಘಟಕಗಳಾಗಿ ವಿಭಾಗಿಸುತ್ತಾರೆ.ಅನ್ವಯಿಕ ಮನಶ್ಯಾಸ್ತ್ರ ಕ್ಷೇತ್ರದಲ್ಲಿ ಪ್ರೀತಿ ಮತ್ತು ಕೆಡಕುಗಳ ವ್ಯಾಖ್ಯಾನಗಳನ್ನು ಪರಿಶೋಧಿಸಿದ ಸ್ಕಾಟ್‌ ಪೆಕ್‌ನ ಕೆಲಸಗಳಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.ಪ್ರೀತಿ ಎನ್ನುವುದು "ಮತ್ತೊಬ್ಬರ ಉದಾತ್ತತೆಯ (=ಆಧ್ಯಾತ್ಮಿಕ) ಬೆಳವಣಿಗೆಗೆ ತೋರುವ ಕಾಳಜಿ" ಹಾಗೂ ಸರಳ ಸ್ವಾರಾಧನಾ ಪ್ರವೃತ್ತಿಯ (=ಸ್ವಪ್ರಶಂಸೆ) ಸಂಯೋಜನೆ ಎನ್ನುವ ವಿವರಣೆಯನ್ನೇ ಉಳಿಸಿಕೊಳ್ಳುತ್ತಾರೆ. ಸಂಯೋಜನೆಯಲ್ಲಿ, ಪ್ರೀತಿ ಒಂದು ಚಟುವಟಿಕೆ ಕೇವಲ ಬರಿ ಭಾವನೆಯಲ್ಲ.

ವೈಜ್ಞಾನಿಕ ಮಾದರಿಗಳ ಹೋಲಿಕೆ

ಪ್ರೀತಿಯ ಜೈವಿಕ ಮಾದರಿಯು ಪ್ರೀತಿಯನ್ನು ಹಸಿವು ಮತ್ತು ಬಾಯಾರಿಕೆಯಂತೆಯೇ ಸಸ್ತನಿಗಳ ಕ್ರಿಯಾಶಕ್ತಿ ಎಂದು ನೋಡಲು ಬಯಸುತ್ತದೆ. ಮನಶ್ಯಾಸ್ತ್ರ ಪ್ರೀತಿಯನ್ನು ಹೆಚ್ಚು ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯವಾಗಿ ನೋಡುತ್ತದೆ.ಈ ಎರಡೂ ದೃಷ್ಟಿಕೋನದಲ್ಲಿ ಬಹುಷಃ ಸತ್ಯಾಂಶಗಳಿರಬಹುದು. ಪ್ರೀತಿ ನಿಸ್ಸಂಶಯವಾಗಿ ಹಾರ್ಮೋನ್‌ಗಳು (ಉದಾಹರಣೆಗೆ, ಆಕ್ಞಿಟೋಸಿನ್‌), ನ್ಯೂರೋಟ್ರೋಫಿನ್‌ಗಳು (ಉದಾಹರಣೆಗೆ, NGF) ಮತ್ತು ಫೆರೋಮೋನ್‌‌ಗಳ ಮೇಲೆ ಅವಲಂಬಿತವಾಗಿರುತ್ತದೆ ಹಾಗೂ ಜನ ಪ್ರೀತಿಯಲ್ಲಿ ಹೇಗೆ ಯೋಚಿಸುತ್ತಾರೆ ಮತ್ತು ಹೇಗೆ ವರ್ತಿಸುತ್ತಾರೆ ಎನ್ನುವುದು ಪ್ರೀತಿಯ ಬಗೆಗೆ ಅವರಿಗಿರುವ ಪರಿಕಲ್ಪನೆಯನ್ನು ಅವಲಂಬಿಸಿರುತ್ತದೆ. ಜೀವಶಾಸ್ತ್ರದ ಪಾರಂಪರಿಕ ದೃಷ್ಟಿಯ ಪ್ರಕಾರ ಪ್ರೀತಿಯಲ್ಲಿ ಎರಡು ಮುಖ್ಯ ಕ್ರಿಯಾಶಕ್ತಿಗಳಿರುತ್ತವೆ. ಅವುಗಳೆಂದರೆ, ಲೈಂಕಿಕ ಆಕರ್ಷಣೆ ಮತ್ತು ಬಾಂಧವ್ಯ.ವಯಸ್ಕರ ನಡುವಿನ ಬಾಂಧವ್ಯ ಅದೇ ತತ್ವಗಳ ಮೇಲೆ ಕಾರ್ಯ ನಿರ್ವಹಿಸಲು ದೈರ್ಯ ನೀಡಿದೆ. ಇದು ಶಿಶು ಅದರ ತಾಯಿಗೆ ಹೊಂದಿಕೊಂಡಿರುವಂತೆ ಮಾಡುತ್ತದೆ.ಪಾರಂಪರಿಕ ಮನಶ್ಯಾಸ್ತ್ರೀಯ ದೃಷ್ಟಿ ಪ್ರೀತಿಯು ಸಾಹಚರ್ಯ ಪ್ರೀತಿ ಮತ್ತು ಭಾವೋದ್ರಿಕ್ತ ಪ್ರೀತಿಯ ಸಂಯೋಜನೆಯಾಗಿದೆ ಎಂದು ನೋಡುತ್ತವೆ. ಭಾವೋದ್ರಿಕ್ತ ಪ್ರೀತಿ ತೀವ್ರ ಹಾತೊರೆಯುವ ಸ್ವಭಾವದ್ದು ಹಾಗೂ ಇದು ಹಲವು ವೇಳೆ ಶಾರೀರಿಕ ಎಚ್ಚರ (ಉಸಿರಾಟದ ಅಭಾವ, ತೀವ್ರ ಹೃದಯ ಬಡಿತ)ವನ್ನು ಹೊಂದಿರುತ್ತದೆ; ಸಾಹಚರ್ಯ ಪ್ರೀತಿ ಒಲವು ಮತ್ತು ಲೈಂಗಿಕತೆಯನ್ನು ಹೊಂದಿರುತ್ತದೆ ಶಾರೀರಿಕ ಎಚ್ಚರವನ್ನಲ್ಲ.

ಪ್ರೀತಿಯ ಮಾಯೆಗೆ ಒಳಗಾಗಿರುವವರ ಮೆದುಳಿನ ಪರೀಕ್ಷೆಗಳು ಮನೋರೋಗಿಗಳ ಮೆದುಳಿನ ಲಕ್ಷಣಗಳನ್ನು ಹೋಲುತ್ತವೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.ಹಸಿವು, ಬಾಯಾರಿಕೆ ಮತ್ತು ಮಾದಕ ವ್ಯಸನಗಳು ಮೆದುಳಿನಲ್ಲಿ ಚಟುವಟಿಕೆಗಳನ್ನು ಹುಟ್ಟುಹಾಕುವ ಪ್ರದೇಶದಲ್ಲೇ ಪ್ರೀತಿಯೂ ಕೂಡ ಚಟುವಟಿಕೆಯನ್ನು ಹುಟ್ಟುಹಾಕುತ್ತದೆ. ಹಾಗಾಗಿ ಹೊಸ ಪ್ರೀತಿ ಮಾನಸಿಕವಾಗಿರುವುದಕ್ಕಿಂತ ಹೆಚ್ಚು ದೈಹಿಕವಾಗಿರುವ ಸಾಧ್ಯತೆಗಳಿವೆ.ಕಾಲಾನಂತರದಲ್ಲಿ ಈ ಸ್ಪಂದನೆ ಪ್ರೀತಿಯನ್ನು ಪಕ್ವಗೊಳಿಸುತ್ತದೆ ಮತ್ತು ಮೆದುಳಿನ ವಿವಿಧ ಭಾಗಗಳನ್ನು ಕ್ರಿಯಾಶೀಲವಾಗಿಸುತ್ತದೆ. ಮುಖ್ಯವಾಗಿ ದೀರ್ಘಕಾಲೀನ ಬದ್ಧತೆಗಳಿಗೆ ಒಳಗಾದವರಲ್ಲಿ ಇದು ಹೆಚ್ಚು.

ಧಾರ್ಮಿಕ ದೃಷ್ಟಿಕೋನಗಳು

ಬೌದ್ಧರು


ಬೌದ್ಧ ಧರ್ಮದಲ್ಲಿ, ಐಂದ್ರಿಯಿಕವಾದ, ಲೈಂಗಿಕ ಪ್ರೀತಿಇದು ಸ್ವಾರ್ಥವಾಗಿರುವುದರಿಂದ ಜ್ಞಾನೋದಯವನ್ನು ಪಡೆಯುವ ಮಾರ್ಗದಲ್ಲಿ ಇದು ಒಂದು ಅಡಚಣೆಯಾಗಿದೆ. ಕರುಣಾ ಇದು ಇತರರ ನೋವನ್ನು ಕಡಿಮೆ ಮಾಡುವ ಸಹಾನುಭೂತಿ ಮತ್ತು ಕರುಣೆಯಾಗಿದೆ.ಇದು ಜ್ಞಾನಕ್ಕೆ ಪೂರಕ ಮತ್ತು ಜ್ಞಾನೋದಯಕ್ಕೆ ಅಗತ್ಯವಾದದ್ದು. ಅದ್ವೇಸ ಮತ್ತು ಮೆಟ್ಟಾ ಗಳು ಧರ್ಮಾರ್ಥ ಪ್ರೀತಿ‌ಗಳು. ಈ ಪ್ರೀತಿ ಷರತ್ತುಗಳಿಂದ ಮುಕ್ತವಾಗಿರುತ್ತದೆ ಮತ್ತು ಇದಕ್ಕೆ ಗಮನಾರ್ಹವಾದ ಅತ್ಮ ಅಂಗೀಕಾರದ ಅಗತ್ಯವಿರುತ್ತದೆ. ಬಾಂದವ್ಯ ಮತ್ತು ಲೈಂಗಿಕತೆಯನ್ನು ಹೊಂದಿರುವ ಮತ್ತು ಸ್ವಾರ್ಥವಿಲ್ಲದ ಹೊರತು ತೀರ ವಿರಳವಾಗಿ ಸಂಭವಿಸುವ ಸಾಮಾನ್ಯ ಪ್ರೀತಿಗಿಂತ ಇದು ಸ್ವಲ್ಪ ಭಿನ್ನ, ಬದಲಿಗೆ ಬೌದ್ಧಧರ್ಮದಲ್ಲಿ ನಿರ್ಲಿಪ್ತತೆ ಮತ್ತು ಇತರರ ಯೋಗಕ್ಷೇಮದಲ್ಲಿ ನಿಸ್ವಾರ್ಥ ಆಸಕ್ತಿಯನ್ನು ಸೂಚಿಸುತ್ತದೆ.

ಮಹಾಯಾನ ಬೌದ್ಧಧರ್ಮದಲ್ಲಿರುವ ಅದರ್ಶವಾದ ಬೋಧಿಸತ್ವ, ಸಂಕಟದಲ್ಲಿ ತೊಳಲಾಡುತ್ತಿರುವ ಜಗತ್ತಿನ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಸರ್ವಸಂಗ ಪರಿತ್ಯಾಗವನ್ನು ಒಳಗೊಳ್ಳುತ್ತದೆ.ಬೋಧಿಸತ್ವದ ಮಾರ್ಗವನ್ನು ಅನುಸರಿಸಲು ಹೊಂದಿರಬೇಕಾದ ಅತ್ಯಂತ ಶಕ್ತಿಶಾಲಿ ಪ್ರೇರಣೆಯೆಂದರೆ, ನಿಸ್ವಾರ್ಥದ ಮಿತಿಯಲ್ಲೇ ಆತ್ಮೋದ್ಧಾರ ಮತ್ತು ಎಲ್ಲ ಸಚೇತನ ಜೀವಿಗಳಿಗೆ ಪರೋಪಕಾರಿಯಾದ ಪ್ರೀತಿ‌ಯನ್ನು ತೋರಿಸುವುದು.

ಹಿಂದೂ ತತ್ವ

ಹಿಂದೂ ಧರ್ಮದಲ್ಲಿ ಕಾಮ ಸಂತೋಷಕರ, ಇಲ್ಲಿ ಲೈಂಗಿಕ ಪ್ರೀತಿಗೆ ಕಾಮದೇವ ಎಂಬ ಮಾನವರೂಪ ಕೊಡಲಾಗಿದೆ. ಇವನೇ ಕಾಮದ ಅಧಿದೇವತೆ. ಹಿಂದೂ ಧರ್ಮದ ಹಲವು ಮಾರ್ಗಗಳಿಗೆ ಇದು ಜೀವನದಲ್ಲಿ ಕೊನೆಯ ಮೂರನೆಯದು(ಅರ್ಥ). ಕಾಮದೇವನನ್ನು ಹಲವುವೇಳೆ ಕಬ್ಬಿನ ಬಿಲ್ಲಿಗೆ ಮತ್ತು ಪುಷ್ಟಬಾಣ ಹಿಡಿದು ಮೀಟಿರುವಂತೆ ಚಿತ್ರಿಸಲಾಗಿರುತ್ತದೆ. ಇವನು ಗಿಳಿಯ ಮೇಲೆ ಸವಾರಿ ಮಾಡಬಹುದು.ಇವನು ಸಾಮಾನ್ಯವಾಗಿ ತನ್ನ ಪತ್ನಿ ರತಿ ಮತ್ತು ತನ್ಮ ಸಹೋದ್ಯೋಗಿ ವಸಂತಕಾಲದ ಅಧಿದೇವ ವಸಂತನೊಂದಿಗಿರುತ್ತಾನೆ.

ಕಾಮಕ್ಕೆ ವಿರುದ್ಧವಾಗಿ ಪ್ರೇಮ ಎನ್ನುವುದು ಉನ್ನತ ಪ್ರೀತಿಯನ್ನು ಸೂಚಿಸುತ್ತದೆ. ಕರುಣ ಎಂದರೆ ಸಹಾನುಭೂತಿ ಮತ್ತು ಕರುಣೆ, ಇದು ಇತರರ ಕಷ್ಟಗಳಿಗೆ ಸ್ಪಂದಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಭಕ್ತಿ ಎನ್ನುವುದು ಸಂಸ್ಕೃತ ಪರಿಭಾಷೆಯಾಗಿದ್ದು, ಇದಕ್ಕೆ "ಪರಮ ಶ್ರೇಷ್ಠ ಭಗವಂತನಿಗೆ ತೋರುವ ಪ್ರೀತಿಪೂರ್ವಕ ಭಕ್ತಿ" ಎಂಬ ಅರ್ಥವಿದೆ. ಭಕ್ತಿಯಲ್ಲಿ ಪಾಲ್ಗೊಳ್ಳುವ ವ್ಯಕ್ತಿಯನ್ನು ಭಕ್ತ ಎನ್ನಲಾಗುತ್ತದೆ.ಹಿಂದೂ ಬರಹಗಾರರು, ಮತಧರ್ಮಶಾಸ್ತ್ರಜ್ಞರು ಮತ್ತು ತತ್ವಜ್ಞಾನಿಗಳು ಭಕ್ತಿಯನ್ನು ಒಂಭತ್ತು ರೂಪಗಳಾಗಿ ವಿಂಗಡಿಸಿದ್ದಾರೆ. ಇದನ್ನು ನಾವು ಭಾಗವತ ಪುರಾಣ ಮತ್ತು ತುಳಸೀದಾಸರ ಬರಹಗಳಲ್ಲಿ ಕಾಣಬಹುದು.ಅನಾಮಿಕನೊಬ್ಬ (ನಾರದ ಬರೆದಿದ್ದಾನೆಂಬ ನಂಬಿಕೆಯಿದೆ) ಬರೆದಿರುವ ನಾರದ ಭಕ್ತಿ ಸೂತ್ರಗಳು ಎಂಬ ತಾತ್ವಿಕ ಬರವಣಿಗೆಯಲ್ಲಿ ಪ್ರೀತಿಯನ್ನು ಹನ್ನೊಂದು ರೂಪಗಳಾಗಿ ವಿಂಗಡಿಸಲಾಗಿದೆ.

ಮಾಹಿತಿ ನೆರವು: ವಿಕಿಪೆಡಿಯಾ

ಪ್ರತಿಸ್ಪಂದನಗಳು

Re: Love (ಪ್ರೀತಿ) is nothing but...
ಏನ್ ಗುರು, ನೀನು ಪ್ರೀತಿಯ ಬಗ್ಗೆ ಬರಹ ಬರೆಯೋದಾ? ನಾನು ಬರಹವನ್ನೋದಿ ಫ್ಲಾಟ್ ಆದೆ. ಅದರಲ್ಲೂ ಪ್ರೀತಿಯ ಬಗ್ಗೆ ಆಳವಾದ ಅಧ್ಯಯನ ಮಾಡಿರೋಹಾಗಿದೆ. (ವಿಕಿಪೀಡಿಯಾದಿಂದ ಆಧಾರ ವಾದ ಲೇಖನವಾಗಿದ್ದರೂ ಸಹ). ಏನೇ ಆಗ್ಲಿ, ಬೆಂಗಳೂರಿನ ಸಹವಾಸವೇ ಹಾಗೆ. ಲಂಗ, ದಾವಣಿಗಳ ಊರಿನಿಂದ, ಜೀನ್ಸ್, ಕಟ್‌ಪೀಸ್ ಊರಿಗೆ ಹೋಗಿರೋ ನಿನಗೆ ಪ್ರೀತಿ, ಪ್ರೇಮದ ವಾಸನೆ ಚೆನ್ನಾಗಿಯೇ ಬಡಿದಿರೋ ಹಾಗಿದೆ. ಕೊನೆಯದಾಗಿ, ನೀನು ಲವ್ ಮಾಡ್ಲಿಕ್ಕೆ ಶುರು ಮಾಡಿದ್ಯಾ?
Re: Love (ಪ್ರೀತಿ) is nothing but...
No never... mostly you didn't read the article fully... I think this article gives only negative points of Love
Re: Love (ಪ್ರೀತಿ) is nothing but...
ಲೇಖನವನ್ನು ವಿವರವಾಗಿಯೇ ಓದಿದ್ದೇನೆ ಸ್ವಾಮಿ. ಖಂಡಿತವಾಗಿ ಇದು negative points ಅನ್ನು ಎತ್ತಿ ತೋರಿಸುವುದಿಲ್ಲ. ನಿಮ್ಮ ಲೇಖನದಲ್ಲಿರುವ ಈ ಮೂರು ತುಣುಕುಗಳನ್ನು ಓದಿ. ಈಗ ನೀವೇ ಹೇಳಿ ನಿಮ್ಮ ಲೇಖನ ಯಾವ ರೀತಿಯಲ್ಲಿ ಪ್ರೀತಿಯ negtive points ಅನ್ನು ಸೂಚಿಸುತ್ತದೆ ಎಂದು.1.ಕಾಲಾನಂತರದಲ್ಲಿ ಈ ಸ್ಪಂದನೆ ಪ್ರೀತಿಯನ್ನು ಪಕ್ವಗೊಳಿಸುತ್ತದೆ ಮತ್ತು ಮೆದುಳಿನ ವಿವಿಧ ಭಾಗಗಳನ್ನು ಕ್ರಿಯಾಶೀಲವಾಗಿಸುತ್ತದೆ. ಮುಖ್ಯವಾಗಿ ದೀರ್ಘಕಾಲೀನ ಬದ್ಧತೆಗಳಿಗೆ ಒಳಗಾದವರಲ್ಲಿ ಇದು ಹೆಚ್ಚು. 2. ಬೋಧಿಸತ್ವದ ಮಾರ್ಗವನ್ನು ಅನುಸರಿಸಲು ಹೊಂದಿರಬೇಕಾದ ಅತ್ಯಂತ ಶಕ್ತಿಶಾಲಿ ಪ್ರೇರಣೆಯೆಂದರೆ, ನಿಸ್ವಾರ್ಥದ ಮಿತಿಯಲ್ಲೇ ಆತ್ಮೋದ್ಧಾರ ಮತ್ತು ಎಲ್ಲ ಸಚೇತನ ಜೀವಿಗಳಿಗೆ ಪರೋಪಕಾರಿಯಾದ ಪ್ರೀತಿ‌ಯನ್ನು ತೋರಿಸುವುದು. 3. ಕಾಮಕ್ಕೆ ವಿರುದ್ಧವಾಗಿ ಪ್ರೇಮ ಎನ್ನುವುದು ಉನ್ನತ ಪ್ರೀತಿಯನ್ನು ಸೂಚಿಸುತ್ತದೆ. ಕರುಣ ಎಂದರೆ ಸಹಾನುಭೂತಿ ಮತ್ತು ಕರುಣೆ, ಇದು ಇತರರ ಕಷ್ಟಗಳಿಗೆ ಸ್ಪಂದಿಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ತಾವು ಪ್ರೀತಿಯ ಸುಳಿಯಲ್ಲಿ ಸಿಕ್ಕಿದ್ದೀರೆಂದು ಒಪ್ಪಿಕೊಳ್ಳಿ. ಪಾಪ ಪ್ರೀತಿ, ಪ್ರೇಮದ ಮೇಲೆ ಏಕೆ ಕಿಡಿ ಕಾರುತ್ತೀರಾ!!!!!!!!!
Re: Love (ಪ್ರೀತಿ) is nothing but...
ಇದು ನಿಮ್ಮ ಮೊದಲ ಉದ್ದದ ಲೇಖನ ಎನಿಸುತ್ತದೆ..ಓದುತ್ತಾ ಹೋದಂತೆ ಅಯ್ಯೋ ಇದು ದೀಪಕ್ ಬರೆದಿದ್ದಾ ಅಂತ ಎಣಿಸಿತ್ತು..ಆದರೆ ಕೊನೆಯಲ್ಲಿ ಮಾಹಿತಿ ನೆರವು ನೋಡಿದ ನಂತರ ವಿಷಯ ಸಂಗ್ರಹಣೆಯು ಇದೆ ಎಂದು ತಿಳಿಯಿತು. ಆದರೂ ಮಾಹಿತಿಯುಕ್ತ ಲೇಖನಕ್ಕೆ ಧನ್ಯವಾದಗಳು, ಮತ್ತು ವೆಬ್‌ದುನಿಯಾದ ಕಡೆ ತಲೆ ಹಾಕುತ್ತಿರಬೇಕಾಗಿ ವಿನಂತಿ.
ಹಕ್ಕು ನಿರಾಕರಣೆ